
ಆರೋಪಿಗಳಾದ ಲಕ್ಷ್ಮೀ, ತಿಪ್ಪೇಶ್ ನಾಯ್ಕ್
ದಾವಣಗೆರೆ, ಜುಲೈ 28: ಪತಿಯನ್ನು ಕೊಲೆ ಮಾಡಿ ಪ್ರಿಯಕರನ ಜತೆ ಕೇರಳಕ್ಕೆ (Kerala) ಪರಾರಿಯಾಗಿದ್ದ ಪತ್ನಿಯನ್ನು ಚನ್ನಗಿರಿ (Channagiri) ಠಾಣೆ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಲಕ್ಷ್ಮೀ (38) ಬಂಧಿತ ಆರೋಪಿ. ಕೊಲೆ ಪ್ರಕರಣದಲ್ಲಿ ಭಾಗಿಯಾದ ಪ್ರಿಯಕರ ತಿಪ್ಪೇಶ್ ನಾಯ್ಕ್ (42) ಮತ್ತು ಸಂತೋಷ್ (40) ಎಂಬುವರನ್ನೂ ಕೂಡ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ನಿಂಗಪ್ಪ ಕೊಲೆಯಾದ ವ್ಯಕ್ತಿ.
ಏನಿದು ಪ್ರಕರಣ?
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತ್ಯಾಗದಕಟ್ಟೆಯ ನಿವಾಸಿ ಲಕ್ಷ್ಮೀ ಮತ್ತು ಚನ್ನಗಿರಿ ತಾಲೂಕಿನ ಅಣ್ಣಾಪುರ ಗ್ರಾಮದ ನಿವಾಸಿಯಾಗಿದ್ದ ನಿಂಗಪ್ಪ ಮದುವೆಯಾಗಿ ಎಂಟು ವರ್ಷ ಕಳೆದಿದೆ. ಮದುವೆಯಾಗಿ ಎಂಟು ವರ್ಷ ಕಳೆದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಮಕ್ಕಳ ಭಾಗ್ಯ ಪಡೆಯಲು ಲಕ್ಷ್ಮೀ ಪತಿಯೊಂದಿಗೆ ಸುತ್ತದ ದೇವಾಲಯವಿರಲಿಲ್ಲ, ಹೋಗದ ಆಸ್ಪತ್ರೆಗಳಿರಲಿಲ್ಲ. ಕೊನೆಗೆ ಒಂದು ದಿನ ನಿಂಗಪ್ಪನಿಗೆ ಮಕ್ಕಳಾಗುವ ಯೋಗವಿಲ್ಲ ಎಂಬುದು ಗೊತ್ತಾಗಿದೆ.
ನಿಂಗಪ್ಪ ಅಡಿಕೆ ಕೆಲಸ ಮಾಡುತ್ತಿದ್ದು ಆತನ ಸ್ನೇಹಿತರಾದ ತಿಪ್ಪೇಶ್ ನಾಯ್ಕ್ ಹಾಗೂ ಸಂತೋಷ್ ಕೂಲಿ ಕೆಲಸಕ್ಕೆ ಬರುತ್ತಿದ್ದರು. ಆಗ, ತಿಪ್ಪೇಶ್ ನಾಯ್ಕ್ಗೆ ಲಕ್ಷ್ಮೀಯ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ, ಅನೈತಿಕ ಸಂಬಂಧ ಬೆಳದಿದೆ. ಇದರ ಪರಿಣಾಮವಾಗಿ ಲಕ್ಷ್ಮೀ ಗರ್ಭಿಣಿಯಾಗಿದ್ದಳು.
ಇದನ್ನೂ ಓದಿ
ತನಗೆ ಮಕ್ಕಳು ಆಗುವುದಿಲ್ಲ ಎಂದು ತಿಳಿದಿದ್ದರೂ ಪತ್ನಿ ಗರ್ಭಿಣಿಯಾಗಿದ್ದರಿಂದ ಅನುಮಾನಗೊಂಡ ನಿಂಗಪ್ಪ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದನು. ಪತಿಯ ವರ್ತನೆಗೆ ಕೋಪಗೊಂಡ ಲಕ್ಷ್ಮೀ ನಾನು ತಾಯಿಯಾಗುವ ಭಾಗ್ಯವನ್ನು ಹಾಳು ಮಾಡಿದ ಪತಿ ನಿಂಗಪ್ಪನನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿ ಸಂಚು ರೂಪಿಸಿದಳು.
2024 ರ ಜನವರಿ 18 ರಂದು ಲಕ್ಷ್ಮೀ ತನ್ನ ಪ್ರಿಯಕರ ತಿಪ್ಪೇಶ್ ನಾಯ್ಕ ಜೊತೆ ಸೇರಿಕೊಂಡು ನಿಂಗಪ್ಪನನ್ನು ಪಾರ್ಟಿ ಮಾಡಿಸುವ ನೆಪದಲ್ಲಿ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ, ಲಕ್ಷ್ಮೀ ಮತ್ತು ತಿಪ್ಪೇಶ್ ಇಬ್ಬರೂ ಸೇರಿಕೊಂಡು ನಿಂಗಪ್ಪನಿಗೆ ಕಂಠಪೂರ್ತಿ ಕುಡಿಸಿದ್ದಾರೆ. ಮದ್ಯದ ನಶೆಯಲ್ಲಿದ್ದ ನಿಂಗಪ್ಪನನ್ನು ಬಸವಾಪುರ ಗ್ರಾಮದ ಬಳಿರುವ ಭದ್ರಾ ನಾಲೆಯಲ್ಲಿ ತಳಿದ್ದಾರೆ. ಬಳಿಕ, ಪತಿ ನಿಂಗಪ್ಪ ಭದ್ರಾ ನಾಲೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ ಎಂದು ಲಕ್ಷ್ಮೀ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪೊಲೀಸರು ಭದ್ರಾ ನಾಲೆಯಲ್ಲಿ ಎಷ್ಟೇ ಶೋಧ ಕಾರ್ಯಾ ನಡೆಸಿದರೂ ನಿಂಗಪ್ಪನ ಪತ್ತೆಯಾಗಿರಲಿಲ್ಲ. ಇದಾದ ಬಳಿಕ ಲಕ್ಷ್ಮೀ ತವರು ಮನೆ ಸೇರಿದ್ದಾಳೆ. ಇತ್ತ ತಿಪ್ಪೇಶ್ ನಾಯ್ಕ್ ಕೆಲಸಕ್ಕೆಂದು ಕೇರಳಕ್ಕೆ ಹೋಗಿ ಅಲ್ಲಿಯೇ ಸೆಟಲ್ ಆಗಿದ್ದಾನೆ. ನಂತರ ತಿಪ್ಪೇಶ್ ಪ್ರೇಯಸಿ ಲಕ್ಷ್ಮೀಯನ್ನು ಕೇರಳಕ್ಕೆ ಕರೆಸಿಕೊಂಡಿದ್ದಾನೆ. ಲಕ್ಷ್ಮೀ ತನ್ನ ತವರು ಮನೆಯಲ್ಲಿ ಯಾರಿಗೂ ಹೇಳದೆ-ಕೇಳದೆ ಕೇರಳಕ್ಕೆ ಹೋಗಿದ್ದಾಳೆ. ಆಗ, ಲಕ್ಷ್ಮೀ ತವರು ಮನೆಯವರು ಲಕ್ಷ್ಮೀ ಕಾಣೆಯಾಗಿದ್ದಾಳೆ ಎಂದು ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಲವರ್ ಜತೆ ಸೇರಿ ಗಂಡನನ್ನು ಕೊಂದ ಪತ್ನಿ, ರಾಜಾ ರಘುವಂಶಿ ಹತ್ಯೆ ನೆನಪಿಸುವ ಮತ್ತೊಂದು ಘಟನೆ
ಲಕ್ಷ್ಮೀ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ತಿಪ್ಪೇಶ್ ನಾಯ್ಕ್ನ ಸ್ನೇಹಿತ ಸಂತೋಷ್ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, “ಲಕ್ಷ್ಮೀ ಹಾಗೂ ತಿಪ್ಪೇಶ್ ನಾಯ್ಕನಿಗೆ ಅಕ್ರಮ ಸಂಬಂಧ ಇದೆ. ಲಕ್ಷ್ಮೀ ಗಂರ್ಭಿಣಿಯಾದಾಗ ನಿಂಗಪ್ಪ ಗರ್ಭಪಾತ ಮಾಡಿಸಿದ್ದನು. ಇದರಿಂದ ಕೋಪಗೊಂಡ ಲಕ್ಷ್ಮೀ, ಪ್ರಿಯಕರ ತಿಪ್ಪೇಶ್ ಜೊತೆ ಸೇರಿಕೊಂಡು ಪತಿ ನಿಂಗಪ್ಪನನ್ನು ಕೊಲೆ ಮಾಡಿದ್ದಾಳೆ” ಎಂದು ಬಾಯಿ ಬಿಟ್ಟಿದ್ದಾನೆ.
ಒಟ್ಟಿನಲ್ಲಿ ಒಂದು ವರ್ಷದ ಹಿಂದೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣ ಕೊಲೆ ಎಂದು ದೃಢಪಟ್ಟಿದ್ದು ಆರೋಪಿಗಳು ಮಾಡಿದ ತಪ್ಪಿಗೆ ಜೈಲು ಸೇರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:18 pm, Mon, 28 July 25